ಪ್ಯಾಂಡನೇಸೀ
	ಏಕದಳ ಸಸ್ಯಗಳ ಗುಂಪಿಗೆ ಸೇರಿದ ಕುಟುಂಬ. ಇದರಲ್ಲಿ 3 ಜಾತಿಗಳೂ 40 ಪ್ರಭೇದಗಳೂ ಉಂಟು. ಇವುಗಳ ಪೈಕಿ 12 ಪ್ರಭೇದಗಳು ಮಾತ್ರ ಭಾರತದಲ್ಲಿ ಕಾಣಸಿಗುತ್ತವೆ. ಕೇದಗೆ ಈ ಕುಟುಂಬದ ಪ್ರಮುಖ ಸದಸ್ಯ. ಪ್ಯಾಂಡನೇಸೀ ಕುಟುಂಬದ ಸಸ್ಯಗಳು ಸಾಮಾನ್ಯವಾಗಿ ಉಷ್ಣವಲಯ ದೇಶಗಳ ನಿವಾಸಿಗಳು. ಪೆಸಿಫಿಕ್ ಸಾಗರ ಹಾಗೂ ಹಿಂದೂ ಮಹಾಸಾಗರ ದ್ವೀಪಸ್ತೋಮಗಳಲ್ಲಿ ಇವು ಹೆಚ್ಚು ವಿಶೇಷ. 

ಇವು ಸಾಮಾನ್ಯವಾಗಿ ವೃಕ್ಷಗಳು. ನೋಡಲು ತೆಂಗು ಜಾತಿಯ ಸಸ್ಯಗಳಂತೆ ಕಾಣುತ್ತವೆ. ಕಾಂಡಕ್ಕೆ ಆಧಾರವಾಗಿ ಕರ್ಣ ಬೇರುಗಳಿರುವುದು ಈ ಕುಟುಂಬದ ಪ್ರಮುಖ ಲಕ್ಷಣಗಳಲ್ಲೊಂದು. ಎಲೆಗಳು ಅತಿ ಉದ್ದವಾಗಿವೆ; ಕಿರಿಯಗಲದ ಇವು ಸಣ್ಣ ಸಣ್ಣ ಮುಳ್ಳುಗಳಿಂದ ಒಳಗೂಡಿವೆ. ಕಾಂಡದ ಅಗ್ರ ಭಾಗದಲ್ಲಿ ಎಲೆಗಳು ಹೆಚ್ಚು ಒತ್ತೊತ್ತಾಗಿರುವುವು. ಪುಷ್ಪಮಂಜರಿ ಸ್ಪೇಡಿಕ್ಸ್ ರೀತಿಯದು. ಹೂಗಳು ತುಂಬ ಸಣ್ಣ ಗಾತ್ರದವು; ಏಕಲಿಂಗಿಗಳು ಪೆರಿಯಾಂತ್ ಇಲ್ಲ. ಕೇಸರಗಳು ಅನೇಕ. ಅಂಡಾಶಯ ಉಚ್ಚಸ್ಥಾನದ್ದು ಫಲ ಡ್ರೂಕ್ ಮಾದರಿಯದು. 

ಈ ಕುಟುಂಬದ ಸೇರಿದ ಪ್ರಮುಖ ಜಾತಿಗಳು ಪ್ಯಾಂಡನಸ್ (ಕೇದಗೆ), ಫ್ರೆಸಿಸಿಷಿಯಾ, ಸರರಂಗ.

ಕೇದಗೆ ಗಿಡದ ಎಲೆಗಳನ್ನು ಚಾವಣಿ ಹೊದೆಸುವುದಕ್ಕೂ ಕಾಗದದ ತಯಾರಿಕೆಗೂ ಉಪಯೋಗಿಸುತ್ತಾರೆ. ಕೆಲ ಬಾರಿ ಎಲೆಗಳಿಂದ ಟೋಪಿ (ಹ್ಯಾಟು), ಚಾಪೆ ಕೊಡೆಗಳನ್ನು ತಯರಿಸುವುದೂ ಉಂಟು. ಎಲೆಗಳಿಂದ ನಾರನ್ನು ತೆಗೆದು ಅದರಿಂದ ಚೀಲ, ಹಗ್ಗ, ಮೀನು ಹಿಡಿಯುವ ಬಲೆಗಳನ್ನು ತಯಾರಿಸುವುದಿದೆ. ಗಂಡು ಹೂಗಳ ಪುಷ್ಪಮಂಜರಿಯಿಂದ ಪಡೆಯಲಾಗುವ ಸುವಾಸನಾ ದ್ರವ್ಯವನ್ನು ಕಾಚಿನ ಜೊತೆ ಬೆರೆಸಿ ವೀಳ್ಳೆದೆಲೆಯೊಂದಿಗೆ ಸೇವಿಸುವುದುಂಟು. ಎಳೆಯ ಪರಿಯಾಂತ್ ಹಾಗೂ ಹಣ್ಣಿನ ತಿರುಳು ತಿನ್ನಲು ಬಲು ರುಚಿ ಎನ್ನಲಾಗಿದೆ.
(ಎಸ್.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ